‘ಸಂತೆಯಲ್ಲಿ ನಿಂತ ಕಬೀರ’ ಸೆನ್ಸಾರ್‌ಗೆ ತಯಾರಿ
Posted date: 13 Mon, Jun 2016 – 07:52:23 AM

‘ಕಬೀರ್ ಖಡಾ ಬಝಾರ್ ಮೇ’- ಇದು ಭೀಷ್ಮ ಸಹಾನಿ ಅವರ ಹೆಸರುವಾಸಿ ನಾಟಕ. ಈ ನಾಟಕವನ್ನು ಹಿರಿಯ ಪತ್ರಕರ್ತ, ಬರಹಗಾರ ಗೋಪಾಲ ವಾಜಪೇಯಿ ‘ಸಂತ್ಯಾಗ ನಿಂತಾನ ಕಬೀರ’ ಹೆಸರಿನಲ್ಲಿ ಕನ್ನಡಕ್ಕೆ ಭಾಷಾಂತರಿಸಿದ್ದರು. ಈಗ ಆ ನಾಟಕ ಡಾ. ಶಿವರಾಜ್ ಕುಮಾರ್ ಅವರ ಮುಖ್ಯ ಭೂಮಿಕೆಯಲ್ಲಿ ‘ಸಂತೆಯಲ್ಲಿ ನಿಂತ ಕಬೀರ’  ಹೆಸರಿನ ಸಿನಿಮಾ ಆಗಿ ರೂಪುಗೊಂಡಿದೆ. ಈ ಸಿನಿಮಾದ ಹಾಡುಗಳು ಮತ್ತು ಸಂಭಾಷಣೆಯನ್ನು ಸ್ವತಃ ಗೋಪಾಲವಾಜಪೇಯಿ ಅವರೇ ರಚಿಸಿದ್ದಾರೆ. ಕಬಡ್ಡಿ ಚಿತ್ರದಿಂದ ನಿರ್ದೇಶಕರಾಗಿ ಹೆಸರು ಮಾಡಿದ್ದ ನರೇಂದ್ರ ಬಾಬು (ಇಂದ್ರಬಾಬು) ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ನೇರ, ನಿಷ್ಠುರ ಹಾಗೂ ಸರಳತೆಗೇ ಹೆಸರಾಗಿದ್ದ ಸಂತ ಕಬೀರರ ಬದುಕಿನ ಕುರಿತ ಸಿನಿಮಾ ಇದಾಗಿದೆ. ಮಹಾನ್ ಮಾನವತಾವಾದಿ ಕಬೀರರ ದೋಹೆಗಳನ್ನು ಕೂಡಾ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಸದ್ಯ ’ಸಂತೆಯಲ್ಲಿ ನಿಂತ ಕಬೀರ’ ಚಿತ್ರ ಸಕಲ ಸಿದ್ದತೆಗಳನ್ನು ಮಾಡಿಕೊಂಡು ಇಷ್ಟರಲ್ಲೇ ಪ್ರಾದೇಶಿಕ ಸೆನ್ಸಾರ್ ಮಂಡಳಿ ಮುಂದೆ ಬರಲಿದೆ ಎಂದು ನಿರ್ದೇಶಕ ಇಂದ್ರ ಬಾಬು (ನರೇಂದ್ರ ಬಾಬು) ತಿಳಿಸಿದ್ದಾರೆ.
ಈ ಚಿತ್ರಕ್ಕಾಗಿ ೪೮ ದಿವಸಗಳ ಕಾಲ ನವೀನ್ ಕುಮಾರ್ ಐ ಅವರ ಛಾಯಾಗ್ರಹಣದಲ್ಲಿ ಬೆಂಗಳೂರು, ಕೆ ಆರ್ ಎಸ್ ಹಿನ್ನೀರು, ಚಿಕ್ಕಮಗಳೂರು ಹಾಗೂ ಚಾಲಾಕುಡಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ.  ಈ ಚಿತ್ರದಲ್ಲಿ ಐದು ಹಾಡುಗಳು ಹಾಗೂ ನಾಲ್ಕು ದೋಹಗಳು ರಜತ ಪರದೆಯಲ್ಲಿ ಆಕರ್ಷಿಸಲಿದೆ. ಗೋಪಾಲ ವಾಜಪೇಯಿ ಅವರ ಗೀತ ಸಾಹಿತ್ಯ, ಚಿತ್ರಕಥೆ ಹಾಗೂ ಸಂಭಾಷಣೆ ಇದೆ. ವಿಶ್ವ ಈ ಚಿತ್ರದ ಸಂಕಲನಕಾರರು. ಸುಬ್ರಮಣ್ಯ ಪ್ರೊಡಕ್ಷನ್ ಅಡಿಯಲ್ಲಿ ಹೊಸಪೇಟೆಯ ಕುಮಾರಸ್ವಾಮಿ ಪತ್ತಿಕೊಂಡ ನಿರ್ಮಾಣದ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದಲ್ಲಿ ತಮಿಳು ನಟ ಶರತ್ ಕುಮಾರ್, ದತ್ತಣ್ಣ, ಅವಿನಾಶ್, ಅನಂತನಾಗ್, ಶರತ್ ಲೋಹಿತಾಶ್ವ, ಭಾಗೀರಥಿ ಬಾಯಿ ಕದಂ, ಪ್ರಶಾಂತ್ ಸಿದ್ದಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed